ಅಮರಾವತಿ ನದಿ
	ತಮಿಳುನಾಡಿನ ಪ್ರಮುಖ ನದಿಗಳಲ್ಲಿ ಒಂದಾಗಿರುವುದಲ್ಲದೆ, ಕಾವೇರಿನದಿಯ ಉಪನದಿಗಳಲ್ಲಿ ಮುಖ್ಯವಾದುದು. ಕೊಂಗುನಾಡು ಎಂದು ಕರೆಯಲ್ಪಡುವ ಕೊಯಮತ್ತೂರಿನ ಪ್ರಸ್ಥಭೂಮಿಯಲ್ಲಿ ಹರಿಯುತ್ತದೆ.

	ಅಣ್ಣಾಮಲೈ ಮತ್ತು ಪಳನಿ ಬೆಟ್ಟಗಳ ಸಂಧಿಸ್ಥಾನದ ಬಳಿ ದಖನ್ನಿನ ಅತ್ಯುನ್ನತ ಶಿಖರವಾದ ಕೇರಳದ ಆನೈಮುಡಿಗೆ (8841') ಪೂರ್ವದಲ್ಲಿ ಈ ನದಿ ಹುಟ್ಟುತ್ತದೆ. ಹೆಚ್ಚುಕಡಿಮೆ ಇದೇ ಸ್ಥಳದಲ್ಲಿ ಪಶ್ಚಿಮ ಅಮರಾವತಿ ಎಂಬ ನದಿ ಹುಟ್ಟಿ ವಿರುದ್ಧ ದಿಕ್ಕಿನಲ್ಲಿ ಹರಿದು ಕೇರಳದ ಪೆರಿಯಾರ್ ನದಿಯನ್ನು ಸೇರುತ್ತದೆ.

	ಅಮರಾವತಿ ಪ್ರಾರಂಭದಲ್ಲಿ ಧಾರಾಪುರವನ್ನು ಹಾಯ್ದು ಅನಂತರ ಪೂರ್ವದಿಕ್ಕಿನಲ್ಲಿ ಮುಂದುವರಿದು ಕರೂರಿನಿಂದ ಸುಮಾರು 15 ಕಿ.ಮೀ. ದೂರದಲ್ಲಿ ಕಾವೇರಿಯನ್ನುû ಸೇರುತ್ತದೆ. ಪ್ರಾರಂಭದಲ್ಲಿ ಸುಮಾರು 2,000'ಗಳಿಗಿಂತಲೂ ಎತ್ತರವಾದ ಬೆಣಚುಕಲ್ಲಿನ ಬೆಟ್ಟಗಳ ಮುಖಾಂತರ ಹರಿದು ಅನಂತರ ಸುಮಾರು ಸಮಮಟ್ಟವಾದ ಬಯಲಿನಲ್ಲಿ ಪ್ರವಹಿಸುತ್ತದೆ.

	ಅಮರಾವತಿ-ಕಾವೇರಿ ಸಂಗಮಪ್ರದೇಶ ಇತಿಹಾಸ ಪ್ರಸಿದ್ಧವಾದುದು. ದಕ್ಷಿಣ ಭಾರತದ ಚೋಳ, ಚೇರ, ಪಾಂಡ್ಯ ಎಂಬ ಮೂರು ಮುಖ್ಯ ರಾಜವಂಶಗಳು ತಮ್ಮ ಭವಿಷ್ಯವನ್ನು ಇಲ್ಲಿ ನಿರ್ಧರಿಸಿದುವು. ಒಮ್ಮೆ ಇದು ಮೈಸೂರು-ಇಂಗ್ಲಿಷರ ಕದನಗಳ ಕೇಂದ್ರವಾಗಿತ್ತು.

	ಈ ನದಿ ವರ್ಷಪೂರ್ತಿ ತುಂಬಿ ಹರಿಯುತ್ತದೆ. ನಾಲ್ಕು ಉಪನದಿಗಳು ಇದನ್ನು ಸೆರುತ್ತವೆ. ಮೇಲ್ಕಣಿವೆ ಜನನಿವಾಸಕ್ಕೆ ಹೆಚ್ಚು ಅನುಕೂಲವಾಗಿಲ್ಲ. ಕೆಳಕಣಿವೆಯಲ್ಲಿ ನೀರಾವರಿ ವ್ಯವಸಾಯಕ್ಕೆ ಹೆಚ್ಚಿನ ಅನುಕೂಲವಿದೆ. ನದಿಗೆ ಹೊಂದಿಕೊಂಡಿರುವ ಪ್ರವಾಹ ಮೈದಾನದ ಅಂಚುಗಳಲ್ಲಿ ಜನಸಂಖ್ಯೆ ಒತ್ತಾಗಿದೆ. ನದಿಯ ಉದ್ದಕ್ಕೂ ಅನೇಕ ಅಣೆಕಟ್ಟುಗಳನ್ನು ನಿರ್ಮಿಸಿ ಆಯಕಟ್ಟಿನ ಪ್ರದೇಶಗಳಲ್ಲಿ ಬತ್ತ, ಹತ್ತಿ ಮತ್ತು ಕಬ್ಬನ್ನು ಬೆಳೆಯುತ್ತಾರೆ. ನದಿ ಹರಿಯುವ ಭೂಭಾಗ ಕೊಯಮತ್ತೂರು ಕೈಗಾರಿಕಾ ಕೇಂದ್ರದ ಉತ್ತಮ ಹಿನ್ನೆಲೆ ಪ್ರದೇಶವಾಗಿದೆ. 								
(ಕೆ.ಆರ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ